ತಲೆಬುರುಡೆ -
	ಶಿರದ ಅಸ್ಥಿಪಂಜರ (ಹೆಡ್). ಹಲವಾರು ಮೂಳೆ ಹಾಗೂ ಮೃದ್ವಸ್ಥಿಗಳಿಂದ ಇದರ ರಚನೆ ಆಗಿದೆ. ಕೆಳದವಡೆಯನ್ನು ಬಿಟ್ಟು ಉಳಿದ ಭಾಗದ ತಲೆಬುರುಡೆಗೆ ಮಿದುಳುಪೆಟ್ಟಿಗೆ (ಕ್ರೇನಿಯಮ್) ಎಂದೂ ಮುಖದ ಎಲಬುಗಳನ್ನು ಬಿಟ್ಟು ಉಳಿದ ತಲೆಬುರುಡೆಯ ಭಾಗಕ್ಕೆ ತಲೆಯ ಗುಮ್ಮಟ (ಕ್ಯಾಲ್‍ವೇರಿಯ) ಎಂದೂ ಹೆಸರು. ಕೆಳದವಡೆಯ ವಿನಾ ಉಳಿದ ಎಲ್ಲ ಮೂಳೆಗಳೂ ಚಲನರಹಿತವಾಗಿ ಒಂದಕೊಂದು ಗಟ್ಟಿಯಾಗಿ ಅಂಟಿಕೊಂಡಿವೆ. ಬಾಲ್ಯದಲ್ಲಿ ಇವುಗಳ ಜೋಡಣೆಯ ಬಿಗಿ ಕಡಿಮೆ ಆಗಿದ್ದರೂ ಯೌವನದ ಹೊತ್ತಿಗೆ ಚಲನೆ ಅಸಾಧ್ಯವೆನ್ನುವಷ್ಟು ಇವು ಅಂಟಿಕೊಳ್ಳುತ್ತವೆ. ಹೀಗಾಗಿ ತಲೆಬುರುಡೆಯ ಬೆಳವಣಿಗೆಯ ಕಾಲದಲ್ಲಿ ಮೂಳೆಗಳ ಮಧ್ಯೆ ಸ್ವಲ್ಪಮಟ್ಟಿಗೆ ಚಲನೆ ಇರುತ್ತದೆ. ಇದು ಶಿಶುವಿನ ಜನನದ ವೇಳೆ ಮತ್ತು ಮುಂದಿನ ಮಿದುಳಿನ                                                                                                ಬೆಳವಣಿಗೆಯ ವೇಳೆ ಸಹಾಯಕವಾಗಿರುತ್ತದೆ. ಕೆಳದವಡೆ ಮಾತ್ರ ಉಳಿದ ತಲೆಬುರುಡೆಯೊಡನೆ ಯಾವಾಗಲೂ ಚಲಿಸುವ ಎಡಬಲಕೀಲುಗಳಿಂದ ಸಂಪರ್ಕಿಸಲ್ಪಟ್ಟಿದೆ. ತಲೆಬುರುಡೆಯ ಮೇಲ್ಛಾವಣಿಗೆ ತಲೆಯಚಿಪ್ಪು (ವಾಲ್ಟ್) ಎಂದು ಹೆಸರು. ಈ ಭಾಗದ ಮೂಳೆಗಳು ಮಗು ಜನಿಸಿದಾಗ ಅಲ್ಲಲ್ಲಿ ಸಂದಿಬಿಟ್ಟು ತೆಳ್ಳಗೂ ಇದ್ದು ಕ್ರಮೇಣ ದಪ್ಪವೂ ಗಟ್ಟಿಯೂ ಆಗುವುದಲ್ಲದೆ ಸಂಧಿಗಳು ಮುಚ್ಚಿಕೊಳ್ಳುತ್ತವೆ. ಸಂಧಿಗಳ ಪೈಕಿ ಎರಡನ್ನು ನೆತ್ತಿಬಾಯಿ ಎಂದು ಕೆರೆಯುವುದುಂಟು.

	ತಲೆಬುರುಡೆಯಲ್ಲಿ ಒಟ್ಟು 28 ಮೂಳೆಗಳುಂಟು. ಇವುಗಳ ಪೈಕಿ 6 ಏಕವಾಗಿಯೂ 11 ಜೊತೆಯಾಗಿಯೂ ಇವೆ. ಅಲ್ಲದೆ ಇವೇ 28 ಮೂಳೆಗಳ ಪೈಕಿ 14 ಮುಖಕ್ಕೂ 8 ಮಿದುಳು ಪೆಟ್ಟಿಗೆಗೂ ಸಂಬಂಧಿಸಿವೆ. ಮಧ್ಯಕಿವಿಯಲ್ಲಿ ಅಡಗಿರುವ 3 ಮೂಳೆಗಳು ಅತಿ ಸಣ್ಣವು. ಅಲ್ಲಲ್ಲಿ ತಲೆಬುರುಡೆ ಮೃದ್ವಸ್ಥಿಗಳಿಂದ ರಚಿತವಾಗಿದೆ. ಕಿವಿಯಲ್ಲಿರುವ ಮೂಳೆಗಳಲ್ಲಿ ಶಬ್ದದ ತರಂಗಗಳು ಹರಿಯುತ್ತವೆ. ಕಿವಿಯ ಹಿಂದೆ ಇರುವ ಕುಚಾಗ್ರಮೂಳೆ ಚಾಚು (ಮ್ಯಾಸ್ಟಾಯ್ಡ್ ಪ್ರಾಸೆಸ್) ಮಾನವ ಬುರುಡೆಯ ವೈಶಿಷ್ಟ್ಯ.  ತಲೆಬುರುಡೆಯ ಮೂಳೆಗಳು ಎರಡು ಪದರಗಳಲ್ಲಿವೆ. ಅವುಗಳ ಮಧ್ಯದಲ್ಲಿ ತಿರುಳಿನ ತೆರನಾದ ಕೆಂಪು ಮಜ್ಜೆ ಉಂಟು. ಇದು ರಕ್ತವರ್ಧಕಾಂಗ. ಆದ್ದರಿಂದ ಕೂದಲಿನಷ್ಟು ಸೂಕ್ಷ್ಮವಾದ ಬಹುರಕ್ತನಾಳಗಳು ಇಲ್ಲಿವೆ. ಮೂಳೆಯ ಹೊರಪದರ ದಪ್ಪ ಮತ್ತು ಗಟ್ಟಿಯಾಗಿ ಇದೆ. ಒಳಪದರ ತೆಳು ಆದರೂ ಬಿರುಸಾಗಿ ಉಂಟು. ಎರಡು ಪದರಗಳ ಮಧ್ಯ ಸ್ಪಂಜಿನಂತೆ ಕಾಣುವ ಲಘುರಚನೆಯ ಮೂಳೆ ಇದೆ. ಸ್ಪಂಜಿನ ತೆರಪಿನಲ್ಲಿ ತುಂಬಿಕೊಂಡಿರುವುದೇ ಕೆಂಪುಮಜ್ಜೆ. ಸ್ಪಂಜು ಮೂಳೆ ಕಾಪುತಡೆಯ (ಬಫರ್) ಕೆಲಸ ಮಾಡುತ್ತದೆ. ಆದ್ದರಿಂದ ಸಣ್ಣ ಪೆಟ್ಟುಗಳು ತಲೆಬುರುಡೆಯ ಮೇಲೆ ಬಿದ್ದಾಗ ಮೂಳೆಯ ಹೊರಪದರ ಒಡೆಯುತ್ತದೆಯೇ ಹೊರತು ಒಳಪದರಕ್ಕೆ ಢಕ್ಕೆ ತಗಲುವುದಿಲ್ಲ. ತಲೆಬುರುಡೆ ಸುಮಾರು ದುಂಡಗಿದೆ. ಆದಕಾರಣ ಬುರುಡೆಗೆ ಭಾರಿ ಪೆಟ್ಟು ಬಿದ್ದಲ್ಲಿ ಪೆಟ್ಟಿನ ಬಿರುಸು ಅಕ್ಕಪಕ್ಕದ ಮೂಳೆಗಳ ಮೂಲಕ ಹರಿದು ನೇರವಾದ ಎದುರು ಮೂಳೆಯಲ್ಲಿ ವ್ಯಕ್ತವಾಗಿ ಅದು ಒಡೆಯಬಹುದು. ಇದರಿಂದಾಗಿ ಮಿದುಳಿಗೆ ಹೆಚ್ಚಿನ ಏಟು ತಗಲುವುದಿಲ್ಲ. ಬುರುಡೆಯ ಒಳಭಾಗದಲ್ಲಿ ಅನೇಕ ಕೋಣೆಗಳು ಇವೆ. ಅತಿದೊಡ್ಡದಾದ ಕೋಣೆಯ ಒಳಗೆ ಮಿದುಳು ಹುದುಗಿದೆ. ನಾಲ್ಕು ಮಧ್ಯಮಗಾತ್ರದ ಕೋಣೆಗಳು ಬರುಡೆಯ ಮುಂಭಾಗದಲ್ಲಿವೆ. ಎರಡು ಕೋಣೆಗಳು ಕಣ್ಣುಗಳಿಗೂ ಒಂದು ಮೂಗಿಗೂ ಇನ್ನೊಂದು ನಾಲಿಗೆಗೂ ನಿಗದಿಯಾಗಿವೆ. ಎರಡೂ ಕಪಾಲದ ಮೂಳೆಗಳಲ್ಲಿ ಅನೇಕ ಚಿಕ್ಕ ಕೋಣೆಗಳಿವೆ. ಇವುಗಳಲ್ಲಿ ಶಬ್ದಗ್ರಹಣ ಮತ್ತು ಸಮತೋಲನದ (ಈಕ್ವಿಲಿಬ್ರಿಯಮ್) ಅಂಗಾಂಗವೂ ಅಡಕವಾಗಿದೆ. ಈ ಮೇಲಿನ ಕೋಣೆಗಳು ಚರ್ಮ ಹೊರತಾಗಿ ಉಳಿದ ಪಂಚೇಂದ್ರಿಯಗಳನ್ನು ರಕ್ಷಿಸುತ್ತವೆ. ಶಬ್ದಗ್ರಹಣ ಮತ್ತು ಸಮತೋಲನದ ಅಗ್ರಾಂಗ ಅಡಕವಾಗಿರುವ ಕಪಾಲಮೂಳೆಯ ಭಾಗ ತಲೆಬುರುಡೆಯ ಮೂಳೆಗಳಲ್ಲೆಲ್ಲ ಅತಿಗಟ್ಟಿಯಾದ ಭಾಗ. ಪ್ರಚೋದನೆಗಳನ್ನು ಬಲು ಸುಲಭವಾಗಿ ಗ್ರಹಿಸಿ ತಕ್ಕ ಪ್ರತಿಕ್ರಿಯೆಯನ್ನು ತತ್‍ಕ್ಷಣವೇ ಉಂಟುಮಾಡುವುದಕ್ಕಾಗಿ ಶಬ್ದಗ್ರಹಣದ ಮತ್ತು ಸಮತೋಲನದ ಅಂಗಾಂಗಗಳು ಬಲು ಸೂಕ್ಷ್ಮ ರಚನೆಗಳು ಕೂಡ ಹೌದು. ಇಂಥ ಸೂಕ್ಷ್ಮ ರಚನೆಯ ಅಂಗಾಂಗಗಳಿಗೆ ಅಪಘಾತ, ಒರಟಾಟ ಮುಂತಾದವುಗಳಿಂದ ಪೆಟ್ಟಾಗದಂತೆ ರಕ್ಷಣೆ ಒದಗಿರಬೇಕಾದುದು ಅಗತ್ಯ. ಆದ್ದರಿಂದ ಅವು ಗಟ್ಟಿಮೂಳೆಯಲ್ಲಿ ಅಡಕವಾಗಿವೆ. ಈ ಮೇಲಿನ ದೊಡ್ಡ ದೊಡ್ಡ ಕೋಣೆಗಳಲ್ಲದೆ ತಲೆಬುರುಡೆಯ ಇತರ ಕೆಲವು ಮೂಳೆಗಳಲ್ಲಿಯೂ ಸಣ್ಣ ಸಣ್ಣ ವಾಯುತುಂಬಿದ ಅನೇಕ ಕೋಶಗಳಿವೆ (ಹಣೆ ಎಲುಬು, ಮೇಲ್ದವಡೆ, ಸ್ಫೀನಾಯ್ಡ್, ಎತ್ಮಾಯ್ಡ್ ಈ ಮೂಳೆಗಳಲ್ಲಿ). ವಾಯುತುಂಬಿದ ಈ ಎಲ್ಲ ಕೋಣೆಗಳೂ ಮೂಗಿನ ಕೋಣೆಗೆ ಪ್ರತ್ಯೇಕ ಪ್ರತ್ಯೇಕವಾಗಿ ತೆರೆಯುತ್ತವೆ. ಇವು ಶಬ್ದತರಂಗಗಳಿಗೆ ಮಾರ್ದನಿ ಪೆಟ್ಟಿಗೆಗಳಾಗಿ ವರ್ತಿಸಿ ಶಬ್ದವನ್ನು ಇಂಪಾಗುವಂತೆ ಮಾಡುತ್ತವೆ. 

	ಕೆಳದವಡೆ ಮುಖದ ಮೂಳೆಗಳ ಪೈಕಿ ಅತಿದೊಡ್ಡದÀು ಮತ್ತು ಗಟ್ಟಿಯಾದದ್ದು. ಕೆಳದವಡೆಯ ಮುಂಭಾಗವೇ ಗಲ್ಲ. ಇದು ಮಾನವ ವೈಶಿಷ್ಯ. ಕೆಳದವಡೆಯ ಹಿಂಭಾಗ ಶಿರದ ಕಡೆಗೆ ಬಾಗಿ ಕಪಾಲಮೂಳೆಯೊಡನೆ ಇಕ್ಕೆಡೆಗಳಲ್ಲೂ ಕಪಾಲ ಕೆಳದವಡೆ ಕೀಲುಗಳಾಗಿ ಏರ್ಪಟ್ಟು ಆಹಾರವನ್ನು ಅಗಿಯಲು ಸಹಾಯ ಮಾಡುವುದು. ಕೆಳದವಡೆ ಕುದುರೆ ಗೊರಸಿನ ಆಕಾರ ಉಂಟು. ಕೆಳ ಮತ್ತು ಮೇಲ್ದವಡೆಗಳಲ್ಲಿ ಹಲ್ಲುಗಳು ಅಡಕವಾಗಿವೆ. ಕೆಳದವಡೆ ಮೇಲೆ ಕೆಳಗೆ ಹಾಗೂ ಅಕ್ಕ ಪಕ್ಕವಾಗಿ ಚಲಿಸಿ ಮೇಲ್ದವಡೆಯೊಂದಿಗೆ ವರ್ತಿಸಿ ಆಹಾರವನ್ನು ಅಗಿದು ನುಂಗಬಲ್ಲ ತುತ್ತಾಗಿ ಮಾಡಲು ನೆರವಾಗುತ್ತದೆ, ಹಲ್ಲುಗಳು ಎರಡು ತಂಡಗಳಲ್ಲಿ ಹುಟ್ಟುತ್ತವೆ: ಒಂದು ತಾತ್ಕಾಲಿಕ ಮತ್ತೊಂದು ಶಾಶ್ವತ. ತಾತ್ಕಾಲಿಕ ಹಲ್ಲುಗಳಿಗೆ ಹಾಲುಹಲ್ಲುಗಳೆಂದು ಹೆಸರು. ಒಟ್ಟು 20 ಹಾಲುಹಲ್ಲುಗಳೂ 32 ಶಾಶ್ವತ ಹಲ್ಲುಗಳೂ ಇವೆ. ಇವುಗಳ ಪೈಕಿ ಹಾಲುಹಲ್ಲುಗಳು ಮೇಲ್ದವಡೆ ಮತ್ತು ಕೆಳದವಡೆಗಳಲ್ಲಿ ತಲಾ 10ರಂತೆಯೂ ಶಾಶ್ವತ ಹಲ್ಲುಗಳು ತಲಾ 16ರಂತೆಯೂ ಇರುವುವು. ಆಕಾರಗಳ ಮೇಲೆ ಹಲ್ಲುಗಳನ್ನು ಮೂರು ಬಗೆಗಳಾಗಿ ವಿಂಗಡಿಸಬಹುದು ; ಮುಂಭಾಗದವು ಬಾಚಿಹಲ್ಲುಗಳು, ಬದಿಯಲ್ಲಿರುವವು ಕೋರೆಹಲ್ಲುಗಳು, ಹಿಂಭಾಗದ ದವಡೆಹಲ್ಲುಗಳು. ಬಾಚಿಹಲ್ಲುಗಳು ಆಹಾರವನ್ನು ಹಿಡಿದು ಕತ್ತರಿಸಲೂ ಕೋರೆಹಲ್ಲುಗಳು ಅದನ್ನು ಸಿಗಿಯಲೂ ದವಡೆಹಲ್ಲುಗಳು, ಅದನ್ನು ಅರೆಯಲೂ ಸಹಾಯಮಾಡುತ್ತವೆ, ಎರಡು ಪಕ್ಕಗಳಿಂದ ಮತ್ತು ಮೇಲ್ದವಡೆಯ ತಳಭಾಗದಿಂದ ಕಮಾನಿನಂತಿರುವ ಚಪ್ಪಟೆಯಾದ ಮೂಳೆಗಳು ಒಳಚಾಚಿ ಬಾಯಿಯ ಅಟ್ಟವಾಗಿ ಬಾಯನ್ನು ಮೂಗಿನ ಕೋಣೆಗಳಿಂದ ಬೇರ್ಪಡಿಸುತ್ತವೆ. ಅಟ್ಟದ ಮೂಳೆ ಆಹಾರವನ್ನು ಅಗಿದು ನುಂಗಲು ಅಲ್ಲದೆ ಮಾತಾಡಲು ಕೂಡ ಸಹಾಯ ಮಾಡುತ್ತದೆ, ಮೇಲ್ದವಡೆ ಮತ್ತು ಕೆಳದವಡೆಗಳು ಸಮರ್ಥವಾಗಿ ಮಾಸಖಂಡಗಳಿಂದ ಕೂಡಿಕೊಂಡಿವೆ. ಇವು ತಮ್ಮ ಪ್ರಬಲ ಚಲನೆಗಳಿಂದ ಆಹಾರವನ್ನು ಕಚ್ಚುವುದು, ಕೀಳುವುದು, ಅರೆಯುವುದು ಇತ್ಯಾದಿ ಕ್ರಿಯೆಗಳನ್ನು ಸಾಧ್ಯವಾಗಿಸುತ್ತವೆ. 

	ಮಿದುಳು ಪೆಟ್ಟಿಗೆ 8 ಮೂಳೆಗಳಿಂದ ರಚಿತವಾಗಿದೆ. ಇದು ಮಿದುಳನ್ನು ರಕ್ಷಿಸುತ್ತದೆ. ಈ ಪೆಟ್ಟಿಗೆಯ ತಳಭಾಗದಲ್ಲಿ ಅನೇಕ ತೂತುಗಳಿವೆ. ಇವುಗಳ ಮೂಲಕ 12 ಜೊತೆ ಶಿರನರಗಳು (ಕ್ರೇನಿಯಲ್ ನವ್ರ್ಸ್) ಹೊರಬೀಳುತ್ತದೆ. ತಳದ ಮುಂಭಾಗದಲ್ಲಿ ಒಂದು ದೊಡ್ಡ ತೂತು ಉಂಟು. ಇದರಿಂದ ಮಿದುಳುಬಳ್ಳಿಯಾಗಿ ಮುಂದುವರಿದು ಹೊರಬಂದು ಬೆನ್ನುಮೂಳೆಯ ಉದ್ದಕ್ಕೂ ಹರಡಿದೆ. ಈ ತೂತಿನ ಪಕ್ಕಗಳಲ್ಲಿರುವ ಉಬ್ಬುಗಳು ಮೊದಲನೆಯ ಬೆನ್ನುಮೂಳೆಯೊಡನೆ ಕೀಲಕವಾಗಿ ವರ್ತಿಸಿ ಮುಂಡದ ಮೇಲೆ ತಲೆಬುರುಡೆಯ ಹಿಂದು ಮುಂದಿನ ಚಲನೆಗೆ ಸಹಾಯ ಮಾಡುವುವು. ಅಲ್ಲದೆ ಈ ಕೀಲು ತಲೆಬರುಡೆಯನ್ನು ಬೆನ್ಗಂಬದ ಮೇಲೆ ಸ್ಥಿರವಾಗಿ ನಿಲ್ಲುವಂತೆ ಕೂಡ ಮಾಡುತ್ತದೆ. ಮೊದಲನೆಯ ಮತ್ತು ಎರಡನೆಯ ಬೆನ್ನುಮೂಳೆಗಳ ನಡುವೆ ಇರುವ ಕೀಲಿನಿಂದ ತಲೆಮುಂಡದ ಮೇಲೆ ಬಲ ಹಾಗೂ ಎಡಗಡೆಗೆ ತಿರುಗಲು ಸಾಧ್ಯವಾಗುತ್ತದೆ. ಮಿದುಳು ಪೆಟ್ಟಿಗೆಯ ತಳಭಾಗದ ಒಳಮುಖ ಮೂರು ಭಾಗಗಳಾಗಿ ವಿಂಗಡಣೆ ಆಗಿದೆ. ಇದರಲ್ಲಿ ಮಿದುಳಿನ ಬೇರೆ ಬೇರೆ ಭಾಗಗಳು ಅಡಕವಾಗಿವೆ. ಮುಂಬದಿಯಲ್ಲಿ ಹಿರಿಮಸ್ತಿಷ್ಕದ ಮುಂಭಾಗವೂ (ಫ್ರಾನ್‍ಟಲ್‍ಲೋಬ್) ಮಧ್ಯದಲ್ಲಿ ಹಿರಿಮಸ್ತಿಷ್ಕದ ಮಧ್ಯಭಾಗವೂ (ಪೆರೈಟೋ ಟೆಂಪೊರಲ್ ಲೋಬ್) ಹಿಂಬದಿಯಲ್ಲಿ ಕಿರಿಮಸ್ತ್ತಿಷ್ಕವೂ (ಸೆರಿಬೆಲ್ಲಮ್) ಅಳವಡಿಕೆಗೊಂಡಿವೆ. ಕಿರಿಮಸ್ತಿಷ್ಕ ಸಮತೋಲನದ ಒಂದು ಮುಖ್ಯವಾದ ಅಂಗ. ಮಧ್ಯಭಾಗದಲ್ಲಿ ಮಿದುಳಿನ ಜೊತೆಗೆ ಅಂತಸ್ಸ್ರಾವೀ ಗ್ರಂಥಿಗಳಲ್ಲೆಲ್ಲ ಅತಿಮುಖ್ಯ ಗ್ರಂಥಿಯಾದ ಪಿಟ್ಯುಯಿಟರಿಗ್ರಂಥಿ ಉಂಟು. ಮಿದುಳು ಪೆಟ್ಟಿಗೆಯ ಒಳಭಾಗದಲ್ಲಿ ಉದ್ದುದ್ದವಾಗಿ ಕಂಡುಬರುವ ಅಗಲವಾದ ಕಾಲಿವೆಗಳಲ್ಲಿ ಮೇಲಿನ ರಕ್ತನಾಳಗಳು (ವೀನಸ್ ಸೈನಸಸ್) ಅಡಕವಾಗಿವೆ. ಮೇಲೆ ಹೇಳಿದ ತೂತುಗಳಲ್ಲದೆ ತಲೆಬುರುಡೆಯಲ್ಲಿ ಅನೇಕ ಸಣ್ಣ ಸಣ್ಣ ರಂಧ್ರಗಳು ಕೂಡ ಉಂಟು. ಇವುಗಳಲ್ಲಿ ಅನೇಕ ಸಣ್ಣ ಸಣ್ಣ ರಕ್ತನಾಳಗಳೂ ನರಗಳೂ ಒಳಗಿನಿಂದ ಹೊರಗೂ ಹೊರಗಿನಿಂದ ಒಳಗೂ ಹಾಯುತ್ತವೆ. ತಲೆಯ ಚಿಪ್ಪಿನ ಹೊರಭಾಗ ನುಣುಪಾಗಿಯೂ ಅಂಡಾಕಾರವಾಯೂ ಇದೆ. ತೆಳುವಾದ ಮಾಂಸಖಂಡಗಳಿಂದ ಕೂಡಿದ ಆದರೆ ಒರಟಾಗಿಯೂ ದಪ್ಪವಾಗಿಯೂ ಇರುವ ಚರ್ಮ ಇದಕ್ಕೆ ಹೊದೆಸಿದಂತೆ ಸುತ್ತುವರಿದಿದೆ. 

	ತಲೆಬುರುಡೆಯ ಹಿಂಭಾಗದಲ್ಲಿ ಅನೇಕ ಉಬ್ಬು ತಗ್ಗುಗಳಿವೆ. ಇವುಗಳಿಗೆ ಮಾಂಸಖಂಡಗಳು ತಂತುಗಟ್ಟುಗಳೂ ಅಂಡಿಕೊಂಡಿವೆ. ತಲೆಬುರುಡೆಯ ಎರಡು ಪಕ್ಕಗಳಲ್ಲೂ ಕಾಣಿಸುವುದು ಮಟ್ಟಸವಲ್ಲದ ಮೇಲ್ಮೈ. ಇದರ ಮಧ್ಯಭಾಗದಲ್ಲಿ ಹೊರಕಿವಿಯ ರಂಧ್ರ ಉಂಟು. ಈ ಭಾಗದಲ್ಲಿ ಕೂಡ ಅನೇಕ ಮಾಂಸಖಂಡಗಳು ಮತ್ತು ತಂತುಗಟ್ಟುಗಳು ಅಂಟಿಕೊಂಡಿವೆ. ತಲೆಬುರುಡೆಯ ಮುಂಭಾಗ ತೀರ ಅಸಮರೂಪ. ಇದರ ಮೇಲ್ಭಾಗ ಹಣೆ. ಈ ಭಾಗ ಮಾತ್ರ ಚಪ್ಪಟೆ ಹಾಗೂ ಮಟ್ಟಸವಾಗಿದೆ. ಇದರ ಮೇಲ್ತುದಿಯ ಇಕ್ಕಡೆಗಳಲ್ಲಿ ಹಣೆಯುಬ್ಬು ಉಂಟು. ಹಣೆಯ ಕೆಳಭಾಗದಲ್ಲಿ ಕಣ್ಣಿನ ಎರಡು ಗೂಡುಗಳಿವೆ. ಇವು ಬಹುಭುಜಾಕೃತಿಯವು. ಆದರೂ ಸುಮಾರಾಗಿ ಗುಂಡಗೆ ಇವೆ. ಕಣ್ಣುಗೂಡಿನ ಮೇಲೆ ಹುಬ್ಬಿನ ಉಬ್ಬು ವಾನರಗಳಲ್ಲಿ ಕಂಡುಬರುವುದಾದರೂ ಮಾನವರಲ್ಲಿ ಈ ಉಬ್ಬುಗಳಿರುವುದಿಲ್ಲ. ಕಣ್ಣು ಗೂಡುಗಳು ಕಣ್ಣುಗಳನ್ನೂ ಇವಕ್ಕೆ ಸಂಬಂಧಪಟ್ಟ ಮಾಂಸಖಂಡಗಳನ್ನೂ ನರಗಳನ್ನೂ ಒಳಗೊಂಡು ರಕ್ಷಿಸುತ್ತವೆ. ಗೂಡುಗಳು ಮುಖದ ಹಾಗೂ ತಲೆಬುರುಡೆಯ ಮೂಳೆಗಳ ಸೇರುವಿಕೆಯಿಂದ ರಚಿತವಾಗಿವೆ. ಇವೆರಡರ ನಡುವೆ ಮುಖ ಮಧ್ಯದಲ್ಲಿ ಮೂಗಿನ ಡೊಗರು ಉಂಟು. ಇದರ ಮೇಲ್ಬಾಗ ಉಬ್ಬು ಹಾಗೂ ಚೂಪು. ಇದರ ಕೆಳಗಿರುವವು ಮೇಲ್ದವಡೆ ಹಾಗೂ ಕೆಳದವಡೆಗಳು. ಮೂಗಿನ ಡೊಗರಿನ ಒಳಭಾಗ ಮಧ್ಯಗೋಡೆಯಿಂದ ಬಲ ಹಾಗೂ ಎಡ ಅರ್ಧಕೋಣೆಗಳಾಗಿ ವಿಂಗಡಣೆ ಆಗಿದೆ. ಮಧ್ಯಗೋಡೆ ಸಾಮಾನ್ಯವಾಗಿ ಬಲಭಾಗಕ್ಕೆ ಉಬ್ಬಿಕೊಂಡಿದೆ. ಇದರಿಂದಾಗಿ ಎಡ ಅರ್ಧ ಕೋಣೆ ದೊಡ್ಡದಾಗಿದೆ. ಮಧ್ಯಗೋಡೆಯ ಹಿಂಭಾಗ ಎರಡು ತೆಳುವಾದ ಮೂಳೆಗಳಿಂದಲೂ ಮುಂಭಾಗ ಒಂದು ಮೃದ್ವಸ್ಥಿಯಿಂದಲೂ ರಚಿತವಾಗಿದೆ. ಕೋಣೆಯ ಪಕ್ಕದ ಗೋಡೆಗಳು ಏರುತಗ್ಗುಗಳಿಂದ ಕೂಡಿವೆ. ಈ ಏರುತಗ್ಗುಗಳು ಕೋಣೆಯ ವಿಸೀರ್ಣವನ್ನು ಹೆಚ್ಚಿಸುತ್ತವೆ. ಇವು ಗೋಡೆ ಪೊರೆಯಂತಿರುವ ಬುಗುರೆಲುಬುಗಳೆಂಬ ಮೂಳೆಗಳಿಂದ ರಚಿಸಲ್ಪಟಿವೆ. ಇವುಗಳಲ್ಲಿ ಅಧಿಕ ರಕ್ತನಾಳಗಳುಂಟು. ಇದರಿಂದ ಉಚ್ಛ್ವಾಸದ ವಾಯುವನ್ನು ಉಷ್ಣತೆಗೆ ತರಲೂ ತೇವಾಂಶವನ್ನು ಹೆಚ್ಚಿಸಲೂ ಸಹಾಯವಾಗುತ್ತದೆ. ಮೊದಲು ತಿಳಿಸಿದಂತೆ ಚಿಕ್ಕ ಚಿಕ್ಕ ವಾಯುತುಂಬಿದ ಕೋಣೆಗಳ ಹೊರತೂತುಗಳನ್ನು ಇಲ್ಲಿ ಕಾಣಬಹುದು. ಬುಗುರೆಲುಬುಗಳು ಅತಿಸೂಕ್ಷ್ಮವಾಗಿವೆ. ತಲೆಬುರುಡೆಯ ತಳಭಾಗದ ಹೊರಮುಖದಲ್ಲಿ ಹಳ್ಳಗಳೂ ಅನೇಕ ರಂಧ್ರಗಳು ಇರುವುವು. ತಲೆಬರುಡೆಯ ಎಲ್ಲ ಮೂಳೆಗಳ ಒಳ ಮತ್ತು ಹೊರಭಾಗಗಳು ತೆಳುವಾದ ರಕ್ತನಾಳಗಳಿಂದ ಕೂಡಿದ ಹೊದಿಕೆಯಿಂದ ಆವೃತವಾಗಿವೆ. ಈ ಹೊದಿಕೆ ಮೂಳೆಗಳಿಗೆ ರಕ್ತ ಪೂರೈಕೆ ಹಾಗೂ ರಕ್ಷಣೆಯನ್ನು ಒದಗಿಸುತ್ತದೆ. ಮೂಳೆಯೂ ಒಂದು ಜೀವವಿರುವ ಅಂಗವಾದ್ದರಿಂದ ಇದರಲ್ಲೂ ರಕ್ತನಾಳಗಳಿರುವುದು ನಿರೀಕ್ಷಿತವೇ. ಮನುಷ್ಯನ ಲಿಂಗಭೇದವನ್ನು ಅರಿಯಲು ಮತ್ತು ವಯಸ್ಸನ್ನು ನಿರ್ಧರಿಸಲು ತೆಲಬುರುಡೆ ಕಂಕಾಲದಲ್ಲಿನ ಸೊಂಟದಮೂಳೆಯ ಹೊರತಾಗಿ ಒಂದು ಮುಖ್ಯಭಾಗವಾಗಿದೆ. ವಯಸ್ಸನ್ನು ಶೋಧಿಸಲು ಹಲ್ಲುಗಳೂ ಕೆಳದವಡೆಯೂ ಮೂಳೆಗಳ ಜಂಟಿಗೆರೆಗಳೂ (ಸೂಚರ್ಸ್) ಸಹಾಯಕವಾಗುತ್ತವೆ. ಲಿಂಗಭೇದವನ್ನು ಅರಿಯಲು ತೂಕ, ಗಾತ್ರ ಹಳ್ಳತಿಟ್ಟುಗಳ ಶ್ರೇಣಿ ಮತ್ತು ಕೆಳದವಡೆಯ ವೈಶಿಷ್ಟ್ಯ- ಇವು ಸಹಾಯಕ.  (ಆರ್. ವಿ.) 

	ಶಿಶುತಲೆಬುರುಡೆಯ ವೈಶಿಷ್ಟ್ಯಗಳು : ಆಗತಾನೇ ಜನಿಸಿದ ಶಿಶುವಿನ ತಲೆ ಬುರುಡೆಯಲ್ಲಿ ಮೇಲೆ ಹೇಳಿರುವ ಅನೇಕ ಲಕ್ಷಣಗಳು ಕಂಡುಬರುವುದಿಲ್ಲ. ಅಲ್ಲದೆ ಕೆಲವು ವ್ಯತ್ಯಾಸಗಳೂ ಉಂಟು. ಮಗುವಿನಲ್ಲಿ ಮಿದುಳು ಪೆಟ್ಟಿಗೆಯನ್ನು ರಚಿಸುವ ಎಂಟು ಮೂಳೆಗಳು ಪ್ರತ್ಯೇಕವಾಗಿರುವುವಲ್ಲದೆ ಅವುಗಳ ನಡುವೆ ತಕ್ಕಷ್ಟು ಅಂತರವೂ ಇರುವುದು. ಇದರಿಂದ ತಲೆಬುರುಡೆಗೆ ಸ್ವಲ್ಪ ಮಟ್ಟಿಗೆ ಸ್ಥಿತಿಸ್ಥಾಪಕ ಸಾಮಥ್ರ್ಯ ದೊರಕಿದಂತಾಗಿದೆ. ಜನಿಸುವ ವೇಳೆ ತಾಯಿಯ ಜನನ ಮಾರ್ಗದಲ್ಲಿ ಮಗುವಿನ ತಲೆಬುರುಡೆ ಸುತ್ತಲೂ ಒತ್ತಲ್ಪಡುತ್ತದೆ. ಆಗ ಈ ಮೂಳೆಗಳ ಅಂತರ ಕಡಿಮೆ ಆಗುವುದಲ್ಲದೆ ಅವು ಒಂದರ ಮೇಲೊಂದು ಚಾಚಿಕೊಂಡು ಬರುಡೆಯ ಗಾತ್ರ ಕಡಿಮೆ ಆಗುವುದು ಸಾಧ್ಯ. ತತ್ಫಲವಾಗಿ ಮಗುವಿನ ಜನನ ಸುಲಭ. ಮಗುವಿನ ಮುಖ ಮೂಳೆಗಳನ್ನು ಮಿದುಳು ಪೆಟ್ಟಿಗೆಯ ಮೂಳೆಗಳಿಗೆ ಹೋಲಿಸಿದರೆ ಅವುಗಳ ಅಳತೆ ಸಣ್ಣ. ಹಲ್ಲುಮೊಳಕೆಗಳು ಮಾತ್ರ ಇರುವುದರಿಂದ ಮೇಲ್ದವಡೆಯಂತೂ ಬಲು ಸಣ್ಣದಾಗಿರುವುದು. ಅಲ್ಲದೆ ಅದರೊಳಗೆ ವಾಯು ತುಂಬಬಲ್ಲ ಕೋಣೆ ಇನ್ನೂ ಉಂಟಾಗಿರುವುದಿಲ್ಲ. ಹುಟ್ಟಿನ ಮಗುವಿನ ಕೆಳದವಡೆಯ ಕೊನೆಯಲ್ಲಿ ಮೇಲ್ಚಾಚಿಕೊಂಡಿರುವ ಭಾಗ ಲೋಪವಾಗಿರುತ್ತದೆ. ಕಿವಿಯ ಹಿಂದಿರುವ ಕುಶಾಗ್ರ ಮೂಳೆ ಚಾಚೂ ಅಷ್ಟೆ. ಕಪಾಲಮೂಳೆಯಲ್ಲಿ ಮೂಳೆಯಿಂದಲೇ ಸೃಷ್ಟಿಯಾದ ಹೊರಕಿವಿನಾಳ ಇರುವುದಿಲ್ಲ. ಬದಲು ಒಂದು ಕಂಡಿ ಮಾತ್ರ ಇರುತ್ತದೆ. ಇದರ ಅಂಚಿನಿಂದಲೇ ಮುಂದೆ ಮಗು ಬೆಳೆದಂತೆ ಎಲುಬು ಕಿವಿನಾಳವೂ ಬೆಳೆಯುತ್ತದೆ. ಮಗುವಿನ ಬುರುಡೆಯಲ್ಲಿ ನೆತ್ತಿಬಾಯಿ ಅಥವಾ ನೆತ್ತಿಸುಳಿ ಇರುವುದನ್ನು ಮೇಲೆ ಹೇಳಿದೆ. 	

	ತಲೆಬುರುಡೆಯ ವಿಕಾಸ: ಪ್ರಾಣಿಗಳ ವಿಕಾಸಕ್ರಮದಲ್ಲಿ ತಲೆಬುರುಡೆ ತೋರುವ ಬದಲಾವಣೆಗಳು ಸಾಮಾನ್ಯವಾಗಿ ತಾಯಿಯ ಗರ್ಭಕೋಶದಲ್ಲಿ ಬೆಳೆಯುತ್ತಿರುವ ಭ್ರೂಣದಲ್ಲೂ ಕಾಣಬರುವುದುಂಟು. ತಲೆಬುರುಡೆಯ ವಿಕಾಸದಲ್ಲಿ ಮುಖ್ಯವಾದ ಘಟ್ಟಗಳು ಇವು : ತಲೆಬುರುಡೆ ಆಗುವ ಭಾಗ ಮೊದಲು ಮಿದುಳನ್ನು ಹೊದ್ದುಕೊಂಡಿರುವ ಕವಚ ಮಾತ್ರ. ಈ ಕವಚದಲ್ಲಿ ಮೂಗಿಗಾಗಿ ಎರಡು ಗುಳಿಗಳು, ಕಣ್ಣಿಗಾಗಿ ಎರಡು, ಕಿವಿಗಾಗಿ ಎರಡು ಗುಳಿಗಳೂ ಇರುತ್ತವೆ. ಕಿವಿಗಳಿಗಳಲ್ಲಿ ವಾಸ್ತವವಾಗಿ ಕಿವಿಯಲ್ಲಿ ಸಮತೋಲನ ಕ್ರಿಯಾಭಾಗಕ್ಕಾಗಿ ಮೀಸಲಾದವು. ಶೀಘ್ರದಲ್ಲಿ ಕಿವಿಗುಳಿಗಳಲ್ಲಿ ಪೂರ್ತಿಯಾಗಿಯೂ ಕಣ್ಣು ಮೂಗು ಗುಳಿಗಳಲ್ಲಿ ಭಾಗಶಃವಾಗಿಯೂ ಮೃದ್ವಸ್ಥಿ ಕಂಡುಬರುತ್ತದೆ. ಭ್ರೂಣದ ತಲೆಯ ಮುಂಭಾಗದಲ್ಲಿ ದಬ್ಬೆಯಾಕಾರದ ಬಲವರ್ಧಕಗಳೂ ಹಿಂಭಾಗದಲ್ಲಿ ಇದೇ ರೀತಿ ಬಲವರ್ಧಕ ಮೃದ್ವಸ್ಥಿತಿಯೂ ವಿಕಸಿಸುತ್ತವೆ. ಅನಂತರ ಮುಂದು ಹಿಂದಿನ ಮೃದ್ವಸ್ಥಿತಿಗಳು ಸೇರಿ ಮಿದುಳಿನ ಬುಡವನ್ನು ಹೊರುವ ಬುರುಡೆಯ ಭಾಗವಾಗುತ್ತದೆ. ಕಣ್ಣು ಕಿವಿ ಮೂಗುಗಳ ಮೃದ್ವಸ್ಥಿಗಳು ಇದರೊಡನೆ ಸೇರಿಕೊಳ್ಳುವುದೂ ಅನಂತರ ಮೃದ್ವಸ್ಥಿ ಮಿದುಳಿನ ಮೇಲು ಭಾಗಕ್ಕೂ ಹರಡಿ ಪೂರ್ಣವಾಗಿ ಮಿದುಳನ್ನು ಮೃದ್ವಸ್ಥಿಕವಚ ಮುಚ್ಚುವಂತಾಗುವುದೂ ಮುಂದಿನ ಘಟ್ಟ. ಮೃದ್ವಸ್ಥಿ ಬುರುಡೆಯ ರಚನೆ ಹೀಗೆ ಆಗುತ್ತದೆ. ಇದು ವಿಕಾಸ ಕ್ರಮದಲ್ಲಿ ಅಲ್ಲದೆ ಮಾನವನೂ ಸೇರಿದಂತೆ ಎಲ್ಲ ಕಶೇರುಕಗಳ ಭ್ರೂಣಗಳ ಬೆಳೆವಣಿಗೆಯಲ್ಲೂ ಕಂಡುಬರುತ್ತದೆ. ನಾಯಿಮೀನಿನ ವರ್ಗಕ್ಕೆ ಸೇರಿದ ಪ್ರಾಣಿಗಳ ತಲೆಬುರುಡೆ ಜನನವಾದ ಮೇಲೆ ಬೆಳೆದ ಸ್ಥಿತಿಯಲ್ಲೂ ಪೂರ್ಣವಾಗಿ ಮೃದ್ವಸ್ಥಿಯಿಂದಲೇ ಆದದ್ದು. 

	ಮುಂದಿನ ವಿಕಾಸದಲ್ಲಿ ಎಲುಬಿನ ತುಕ್ಕಡಗಳು ಅಲ್ಲಲ್ಲಿ ಕಂಡುಬಂದು ಬುರುಡೆ ಹೆಚ್ಚು ದೃಢವಾಗುತ್ತದೆ. ಗ್ಯಾನಾಯ್ಡ್‍ಗಳೆಂಬ ಮೀನುವರ್ಗದಲ್ಲಿ ಹೀಗೆ. ಎಲುಬಿನ ತುಕ್ಕಡಗಳು ಬುರುಡೆಯಲ್ಲೆ ಅಲ್ಲದೆ ದೇಹದ ಇತರ ಭಾಗಗಳಲ್ಲೂ ಅಸ್ತಿತ್ವಗೊಳ್ಳುತ್ತವೆ. ಇವನ್ನು ಚರ್ಮ ಸಂಬಂಧಿಕ ಎಲುಬುಗಳೆಂದು (ಡರ್ಮಲ್ ಬೋನ್ಸ್) ಕರೆಯಲಾಗಿದೆ. ಕಾರಣ ಇವು ಚರ್ಮಕ್ಕೆ ಸಂಬಂಧಿಸಿದ ಮತ್ತು ಇತರ ಬಂಧನಾಂಗಾಂಶಗಳಲ್ಲಿ ಬೆಳೆದು ಬಂದಂಥವು. ಪ್ರಪಂಚದಲ್ಲಿ ವ್ಯಾಪಕವಾಗಿ ಕಂಡುಬರುವ ಎಲುಬು ಮೀನುವರ್ಗದಲ್ಲಿ ತಲೆಬುರುಡೆ ಇಂಥ ಮೂಳೆಗಳಿಂದಾದದ್ದು. ವಿಕಾಸದಲ್ಲಿ ಮೀನುಗಳಿಗಿಂತ ಉಚ್ಚ ವರ್ಗಗಳಲ್ಲಿ ತಲೆಯ ಮೇಲು ಭಾಗದಲ್ಲಿನ ಮೂಳೆ ಚರ್ಮಕ್ಕೆ ಸಂಬಂಧಿಸಿದ ಬಂಧನಾಂಗಾಂಶದಿಂದ ಮಾತ್ರವೇ ಉದ್ಭವಿಸಿದೆ. ಮೂಳೆಯಿಂದಾದ ಹೊರತಲೆಬುರುಡೆಯ ಒಳಗೆ ಮೃದ್ವಸ್ಥಿಯಿಂದಾದ ಪ್ರಾಚೀನ ಬುರುಡೆ ಇದ್ದಂತಿರುವ ಸ್ಥಿತಿ ಇದು. ಕ್ರಮೇಣ ಮಿದುಳಿನ ಅಡಿಯಲ್ಲಿ ಹಾಗೂ ಕಣ್ಣು ಕಿವಿ ಮೂಗುಗಳೆಡೆಯಲ್ಲಿ ಈ ಮೃದ್ವಸ್ಥಿ ಬುರುಡೆ ಎಲುಬಾಗಿ ಪರಿವರ್ತಿತವಾಗುತ್ತದೆ. ಈ ಮೂಳೆ ಭಾಗಗಳೊಡನೆ ಚರ್ಮ ಸಂಬಂಧಿಕ ಮೂಳೆಗಳು ಕಶೇರುಕಗಳ ವಿವಿಧ ವರ್ಗಗಳಲ್ಲಿ ವಿವಿಧ ಪ್ರಮಾಣದಲ್ಲಿ ಜಂಟಿಯಾಗಿ ಆ ವರ್ಗದ ವಿಶಿಷ್ಟ ಪೂರಿತ ಬುರುಡೆಯ ನಿರ್ಮಾಣವಾಗುತ್ತದೆ. 

	ಕೆಳದವಡೆ ಹಾಗೂ ಹಯಾಯ್ಡ್ ಮೂಳೆ ವಾಸ್ತವಾಗಿ ಗಂಟಲಿಗೆ ಸಂಬಂಧಿಸಿದಂತೆ ವಿಕಸಿಸಿರುವುವು. ಕೆಳದರ್ಜೆ ಮೀನುಗಳಲ್ಲಿ ಕಿವಿರುಗಳಿಗೆ (ಗಿಲ್ಸ್) ಆಶ್ರಯ ಕೊಡುವವು ಗಂಟಲು ಪ್ರದೇಶದ ಮೃದ್ವಸ್ಥಿ ದಬ್ಬೆಗಳು. ಈ ಮೀನುಗಳ ಮೇಲ್ದವಡೆ ಪೆಲೇಟೋ ಕ್ವಾಡ್ರೇಟ್ ದಬ್ಬೆ . ಇದೂ ಮೃದ್ವಸ್ಥಿಯೇ, ಕೆಳದವಡೆ ಮೆಕ್ಕೆಲನ ಮೃದ್ವಸ್ಥಿ. ದವಡೆಗಳ ಹಿಂದಿನ ತುದಿಗಳು — ಕ್ವಾಡ್ರೇಟ್ ಮತ್ತು ಕೀಲಿನ ಮೃದ್ವಸ್ಥಿ (ಆರ್ಟಿಕ್ಯುಲರ್ ಕಾರ್ಟಿಲÉೀಜ್) ಸಂಪರ್ಕಿಸಿ ದವಡೆ ಕೀಲಾಗಿದೆ. ವಿಕಾಸಕ್ರಮದಲ್ಲಿ ಚರ್ಮಸಂಬಂಧಿಕ ಎಲುಬುಗಳು ಇವುಗಳ ನೆರೆಯಲ್ಲಿ ಕಂಡು ಬಂದಾಗ ಪ್ರಾರಂಭದಲ್ಲಿ ದವಡೆಯ ಕೀಲು ಹೀಗೆಯೇ ಇದ್ದರೂ ವಿಕಾಸ ಮುಂದುವರಿದಂತೆ ಈ ಕೀಲಿನ ನಿರ್ಮಾತೃಗಳಾದ ಕ್ವಾಡ್ರೇಟ್ ಹಾಗೂ ಕೀಲಿನ ಮೃದ್ವಸ್ಥಿಗಳು ಅನುಕ್ರವಾಗಿ ನಡುಕಿವಿಯ ಇನ್‍ಕಸ್ ಮತ್ತು ಮ್ಯಾಲಿಯಸ್ ಎಂಬ ಸಣ್ಣ ಮೂಳೆಗಳಾಗಿ ಮಾರ್ಪಡುತ್ತವೆ. ಬಲ ದವಡೆಯ ಕೀಲು ಚರ್ಮ ಸಂಬಂಧಿಕ ಮೂಳೆಯಿಂದಾದ ಕೆಳದವಡೆ ಹಾಗೂ ತಲೆಬುರುಡೆಯ ಕಪಾಲಮೂಳೆ ಇವುಗಳ ನಡುವೆ ಏರ್ಪಡುತ್ತದೆ. ಮೀನುಗಳ ಎರಡನೆಯ ಹಾಗೂ ಮೂರನೆಯ ಕಿವಿರು ಆಶ್ರಯ ದಬ್ಬೆಗಳು ವಿಕಾಸಕ್ರಮದಲ್ಲಿ ಬದಲಾಯಿಸಿ ಮೇಲ್ದರ್ಜೆ ಪ್ರಾಣಿಗಳ ಹಯಾಯ್ಡ್ ಮೂಳೆ, ಸ್ಟೈಲಾಯ್ಡ್‍ವಾಲ (ಪ್ರಾಸೆಸ್) ಮತ್ತು ಇವೆರಡರ ನಡುವೆ ಇರುವ ತಂತುಗಟ್ಟಾಗಿ ಮಾರ್ಪಡುತ್ತವೆ. ನಡುಕಿವಿಯ ಮೂರನೆಯ ಮೂಳೆ ಸ್ಟೇಪೀಸ್ ಕೂಡ ಬಹುಶಃ ಎರಡನೆಯ ಕಿವಿರು ಆಶ್ರಯದಬ್ಬೆಯಿಂದಲೇ ಆಗಿದೆ. ಮಿಕ್ಕ ಕಿವಿರು ಆಶ್ರಯದಬ್ಬೆಗಳು ಧ್ವನಿಪೆಟ್ಟಿಗೆಯ ನಿರ್ಮಾಣದಲ್ಲಿ ಅದರ ಮೃದ್ವಸ್ಥಿ ಕಟ್ಟಾಗಿ ವಿಕಸಿಸುತ್ತವೆ. ಒಟ್ಟಿನಲ್ಲಿ ಮಾನವ ತಲೆಬುರುಡೆ ಹೀಗೆ ವಿಕಾಸವಾದಂತಿದೆ : ಬುರುಡೆಯ ತಳಭಾಗ ಬಹಳ ಹಳತು; ಅಂತೆಯೇ ಕಿವಿ, ಮೂಗು ಕಣ್ಣುಗಳಿಗೆ ಸಂಬಂಧಿಸಿದ ಮೂಳೆಗಳು. ಇವಕ್ಕೆ ಹೋಲಿಸಿದರೆ ಕೆಳದವಡೆ, ಮುಖಮೂಳೆಗಳು ಹಾಗೂ ತಲೆಗುಮ್ಮಟ ಇವು ಈಚಿನವು ಹಾಗೂ ಧರ್ಮ ಸಂಬಂಧಿಕ ಮೂಳೆಯಿಂದಾದವು. 

	ಮಾನವ ಶಾಸ್ತ್ರದಲ್ಲಿ (ಆಂಥ್ರೊಪಾಲಜಿ) ತಲೆಬುರುಡೆಯ ಪ್ರಾಮುಖ್ಯ : ಮಾನವ ತಲೆಬುರುಡೆಯ ವೈಶಿಷ್ಟ್ಯಗಳು ಹಲವಾರು. ಇವುಗಳಿಂದ ಮಾನವನನ್ನು ವಾನರಗಳಿಂದಲೂ ಆದಿಮಾನವರಿಂದಲೂ ವಿಂಗಡಿಸಬಹುದಲ್ಲದೆ ಪ್ರಸಕ್ತಕಾಲೀನ ಮಾನವರನ್ನೂ ವರ್ಗೀಕರಿಸಬಹುದಾಗಿದೆ. ಮಾನವನ ಮಿದುಳು ಪೆಟ್ಟಿಗೆಯ ಘನ ಅಳತೆ 1,351-1,450 ಮಿಲಿಲೀಟರ್‍ಗಳಷ್ಟು. ಇದಕ್ಕಿಂತ ಸ್ವಲ್ಪ ದಪ್ಪ ಅಥವಾ ಸಣ್ಣಗಿರುವ ಮಾನವ ತಲೆಬುರುಡೆಗಳು ಅಸಹಜಸ್ಥಿಯವಾಗಿದ್ದು ಅಂಥ ಮಾನವ ವ್ಯಕ್ತಿಗಳು ಸಾಮಾನ್ಯವಾಗಿ ಹುಟ್ಟುದಡ್ಡರಾಗಿರುತ್ತಾರೆ. ಆದಿಮಾನವರ ಮಿದುಳುಪೆಟ್ಟಿಗೆ ಸುಮಾರು 900 - 1,000 ಮಿಲಿಲೀಟರ್‍ಗಳಷ್ಟೂ ಗೊರಿಲ್ಲದ್ದು ಸುಮಾರು 350 ಮಿಲ್‍ಗಳಷ್ಟೂ ಇರುತ್ತವೆ. ಆದಿಮಾನವರ ಮಿದುಳುಪೆಟ್ಟಿಗೆಯಲ್ಲಿ ಇರಬಹುದಾದ ಮಿದುಳಿನ ಗಾತ್ರ ಅವರ ವಿಕಾಸಕ್ಕೆ ತಕ್ಕಷ್ಟು ಅಧಿಕವಾಗಿರಲಾರದೆÉ ಅವರು ಅಳಿದುಹೋದರೆಂದು ಅಭಿಪ್ರಾಯವಿದೆ. ಆದರೆ ಸುಮಾರು 1,500-1,600 ಮಿಲ್ ಘನ ಅಳತೆಯುಳ್ಳ ತಲೆಬುರುಡೆಯನ್ನು ಹೊಂದಿದ ಮಾನವಕುಲ ಆಫ್ರಿಕದಲ್ಲಿತ್ತೆಂದೂ ಅಷ್ಟು ದೊಡ್ಡ ಮಿದುಳಿದ್ದರೂ ಆ ಕುಲ ಪರಿಸರದ ತೊಡರುಗಳನ್ನು ಎದುರಿಸಿ ಬಾಳಲಾರದೆ ಅಳಿದುಹೋಯಿತೆಂದೂ ತಿಳಿದಿದೆ. ಮಾನವನ ತಲೆಬುರುಡೆಯಲ್ಲಿ ಹಣೆ ಮೂಳೆ ನುಣ್ಣಗೂ ಲಂಬಗತಿಯಲ್ಲೂ ಇದೆ. ವಾನರ ಆದಿಮಾನವರಲ್ಲಿ ಹಣೆ ಓರೆಯಾಗಿರುವುದು. ಅದರಲ್ಲಿ ಉಬ್ಬು ಇಲ್ಲದಿರುವುದೂ ಅದು ವಾನರ ಹಾಗೂ ಆದಿಮಾನವರಲ್ಲಿರುವುದೂ ಮೇಲೆ ಹೇಳಿದೆ. ಮೇಲ್ದವಡೆಯಲ್ಲಿ ಕೋರೆಹಲ್ಲಿರುವ ಸ್ಥಳಕ್ಕಿಂತ ಮೇಲೆ ಹಳ್ಳವಾಗಿರುವುದು ಮಾನವ ವೈಶಿಷ್ಡ್ಯ. ವಾನರ ಆದಿಮಾನವರಲ್ಲಿ ಹಳ್ಳವಿರುವುದಿಲ್ಲ. ಬದಲು ಆ ಭಾಗ ದಿಬ್ಬಾಗಿಯೇ ಇರಬಹುದು. ಮಿದುಳುಬಳ್ಳಿ ಮಿದುಳನ್ನು ಸೇರಿಕೊಳ್ಳಲು ತೂರುವ ರಂಧ್ರ ಮಾನವರಲ್ಲಿ ನೆಲಮಟ್ಟಕ್ಕೆ ಸಮವಾಗಿದೆ. ಗೊರಿಲ್ಲದಲ್ಲಿ ಸ್ವಲ್ಪ ಓರೆಯಾಗಿದೆ. ಚತುಷ್ಪಾದಿಗಳಲ್ಲಿ ಇದು ಲಂಬವಾಗಿಯೇ ಇರುವುದು. ಮಾನವನ ಕೆಳದವಡೆ ವೈಶಿಷ್ಟ್ಯಪೂರಿತವಾಗಿದೆ. ಹಿಂದಿನ ತುದಿ ಮೇಲಕ್ಕೆ ಚಾಚಿಕೊಂಡಿರುವುದು. ಆ ಚಾಚಿನಲ್ಲಿ ದವಡೆ ಕೀಲು ಏರ್ಪಸಲು ಒಂದು ಗಂಟು (ಕಾನ್‍ಡೈಲ್) ಇರುವುದು. ಗಲ್ಲ ಮುಂದಿನ ಉಬ್ಬಾಗಿ ಕಾಣಿಸುವುದು. ಇವು ವಾನರಗಳ ಕೆಳದವಡೆಯಲ್ಲಿ ಕಾಣಬರುವುದಿಲ್ಲ. ವಾನರಗಳ ಕೆಳದವಡೆಯ ಗಲ್ಲದ ಹಿಂಬದಿಯಲ್ಲಿ ಒಂದು ಉಬ್ಬು ಉಂಟು. ಇದು ಮಾನವರಲ್ಲಿ ಇರುವುದಿಲ್ಲ. ಬಹುಶಃ ಆದಿಮಾನವರಲ್ಲಿ ಇದು ಇರಲಿಲ್ಲವೆಂದು ತೋರುತ್ತದೆ. 

	ತಲೆಬುರುಡೆಯ ಅತಿ ಹೆಚ್ಚಿನ ಉದ್ದದ ಮತ್ತು ಅಗಲದ ಅಳತೆಯ ಪ್ರಮಾಣ ವಿವಿಧ ಮಾನವಜನಾಂಗಗಳನ್ನು ಅರಿಯಲು ಸಹಾಯಕವಾಗಿವೆ. ಹುಬ್ಬುಗಳ ನಡುಮಧ್ಯಸ್ಥಳಕ್ಕೂ (ಗ್ಲಬೆಲ್ಲ) ತಲೆಬುರುಡೆಯ ಅತ್ಯಂತ ಹಿಂಬದಿ ಭಾಗಕ್ಕೂ ಇರುವ ಅಂತರ ತಲೆಯ ಉದ್ದ, ಕಿವಿರಂಧ್ರಕ್ಕೆ ಸ್ವಲ್ಪ ಮೇಲೆ ಹಾಗೂ ಸ್ವಲ್ಪ ಹಿಂದೆ ಇರುವ ಸ್ಥಳಗಳ ನಡುವೆ ಇರುವ ಅಂತರವೇ ಸಾಮಾನ್ಯವಾಗಿ ತಲೆಬುರುಡೆಯ ಗರಿಷ್ಠ ಅಗಲ. ಈ ಉದ್ದ ಅಗಲಗಳನ್ನು ಸೂಕ್ತ ವ್ಯಾಸಮಾಪಕದಿಂದ (ಕ್ಯಾಲಿಪರ್ಸ್) ಅಳೆಯಲಾಗುತ್ತದೆ. ಅಗಲ ಉದ್ದಗಳ ನಡುವಿರುವ ನಿಷ್ಪತ್ತಿಯನ್ನು (ರೇಷಿಯೋ) 100 ರಿಂದ ಗುಣಿಸಿದರೆ ಲಬ್ಧವಾಗುವ ಸಂಖ್ಯೆಗೆ ತಲೆಯ ಸೂಚ್ಯಂಕ (ಕಿಫ್ಯಾಲಿಕ್ ಇನ್‍ಡೆಕ್ಸ್) ಎಂದು ಹೆಸರು.  ಈ ಅಂಕ 75ಕ್ಕಿಂತ ಕಡಿಮೆ ಇದ್ದರೆ ಅದಕ್ಕೆ ನಿಡುದಲೆ (ಡಾಲಿಕೊ ಕಿಫ್ಯಾಲಿಕ್ ಹೆಡ್) ಎಂದು ಹೆಸರು. ಮೇಲಿನಿಂದ ನೋಡಿದರೆ ಇಂಥ ತಲೆ ಸೌತೆಕಾಯಿಯಂತೆ ಉದ್ದುದ್ದವಾಗಿರುತ್ತದೆ. ಇದು ಆಸ್ಟ್ರೇಲಿಯದ ದೇಶೀಯ ಜನಾಂಗದ ತಲೆಯ ವೈಶಿಷ್ಟ್ಯ. ತಲೆಯ ಸೂಚ್ಯಂಕ 80ಕ್ಕೆ ಮೇಲ್ಪಟ್ಟು ಇದ್ದರೆ ತಲೆ ಗಿಡ್ಡಾಗಿಯೂ ದಪ್ಪವಾಗಿಯೂ ಇದೆ ಎಂದು ಅರ್ಥ. ಇದಕ್ಕೆ ಮೋಟುತಲೆ (ಬ್ರ್ಯಾಕಿ ಕಿಫ್ಯಾಲಿಕ್ ಹೆಡ್) ಎಂದು ಹೆಸರು. ಇದು ಮಂಗೋಲಿಯನ್ನರಲ್ಲೂ ಅಂಡಮಾನಿನ ದೇಶೀಯ ನಿವಾಸಿಗಳಲ್ಲೂ ಕಂಡುಬರುವಂಥ ತಲೆ ತಲೆಸೂಚ್ಯಂಕ 75 ರಿಂದ 80ರ ಒಳಗೆ ಇದ್ದರೆ ಇಂಥ ತಲೆಗೆ ಅಂಡಾಕಾರದ ತಲೆ (ಮಿಸ್ಯಾಟಿ ಕಿಫ್ಯಾಲಿಕ್ ಹೆಡ್) ಎಂದು ಹೆಸರÀು. ಯೂರೋಪ್ ಹಾಗೂ ಚೀನಾದೇಶದ ಜನಾಂಗ ಸಾಮಾನ್ಯವಾಗಿ ಅಂಡಾಕಾರದ ತಲೆಯವರು.			   (ಎಸ್. ಆರ್. ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ